|
ಸಾಮಾಜಿಕ, ಜಾತಿ ವ್ಯವಸ್ಥೆ,
ಬಡವರ, ಧೀನದಲಿತರ ಶೋಷಣೆಗಳನ್ನು ಕಣ್ಣಾರೆ ಕಂಡು
ಅನುಭವಿಸಿದ್ದನ್ನು ತಮ್ಮ ಕಥೆ, ಕಾದಂಬರಿಗಳಲ್ಲಿ ಯಥಾವತ್ತಾಗಿ
ಚಿತ್ರಿಸುವ ಮೂಲಕ, ಸಮಾಜಕ್ಕೆ ಚಾಟಿ ಏಟು ನೀಡಿದವರು ಶ್ರೀಮತಿ
ಗೀತಾ ನಾಗಭೂಷಣ, ಬಡತನದಲ್ಲಿ ಹುಟ್ಟಿ ಬೆಳೆದ ಶ್ರೀಮತಿ ಗೀತಾ
ನಾಗಭೂಷಣ ಅವರು ಕಷ್ಟದಿಂದಲೇ ವಿದ್ಯಾಭ್ಯಾಸ ಮಾಡಿ,
ಸ್ನಾತಕೋತ್ತರ ಪದವಿ ಪಡೆದು ಶಿಕ್ಷಕ ವೃತ್ತಿ ಆರಂಭಿಸಿ, ದಕ್ಷ
ಆಡಳಿತಗಾರರೆಂದು ಹೆಸರು ಮಾಡಿ ಪ್ರಾಚಾರ್ಯರಾಗಿ ನಿವೃತ್ತಿ
ಹೊಂದಿದವರು. ತಮ್ಮ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿ,
ವ್ಯವಸ್ಥೆಯ ಡಾಂಭಿಕತನಗಳನ್ನು ಸತ್ಯಕಥಾ ರೂಪದಲ್ಲಿ ಸಾಹಿತ್ಯ
ರಚನೆಯಲ್ಲಿ ತೊಡಗಿಕೊಂಡರು. ಹಲವು ಕಾದಂಬರಿಗಳು ಸಿನೆಮಾ ಕೂಡ
ಆಗಿ ಗೀತಾ ನಾಗಭೂಷಣ ಅವರು ಕನ್ನಡ ಸಾಹಿತ್ಯ
ದಿಗ್ಗಜರೆನಿಸಿಕೊಂಡರು.
ಇದುವರೆಗೆ 31 ಕೃತಿಗಳನ್ನು
ರಚಿಸಿದ್ದು, ಇತ್ತೀಚಿನ
ಕೃತಿ
'ಕಾಗೆ ಮುಟ್ಟಿತು’
ಇವರ ಗಟ್ಟಿ ಹಾಗೂ ಸತ್ವಯುತ ಸಾಹಿತ್ಯ ಮನ್ನಿಸಿ ಕೇಂದ್ರ
ಸಾಹಿತ್ಯ ಅಕಾಡೆಮಿ ಇವರ ‘ಬದುಕು’
ಕಾದಂಬರಿಗೆ ಪ್ರಶಸ್ತಿ ನೀಡಿತು. ಅತ್ತಿಮಬ್ಬೆ, ನಾಡೋಜ ಮುಂತಾದ
ಹಲವು ಪ್ರಶಸ್ತಿಗಳು
ಇವರನ್ನು ಅರಸಿಕೊಂಡು ಬಂದವು. ಕಲಬುರ್ಗಿ
ವಿಶ್ವವಿದ್ಯಾಲಯ ಇವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.
ಕಲಬುರ್ಗಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ
ಆಯ್ಕೆಯಾದರು. ಇದೀಗ ಡಾ. ಶ್ರೀಮತಿ ಗೀತಾ ನಾಗಭೂಷಣ ಅವರಿಗೆ 76
ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಕಿರೀಟ
ತೊಡಿಸಲಾಗಿದೆ.
ಹೈದರಾಬಾದ್ ಕರ್ನಾಟದಕದಲ್ಲಿ ಇದುವರೆಗೆ ಹನ್ನೊಂದು
ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಆದರೆ ಈ ಭಾಗದ
ದಿ. ಸಿದ್ದಯ್ಯ ಪುರಾಣಿಕ ಹಾಗೂ ದಿ. ಶಾಂತರಸರಿಗೆ ಮಾತ್ರ
ಸಮ್ಮೇಳನಾಧ್ಯಕ್ಷತೆಯ ಗೌರವ ದೊರಕಿದ್ದವು. ಇವೆರಡೂ ನಡೆದದ್ದು
ಇದೇ ಭಾಗದಲ್ಲಿ, ಆದರೆ ಶ್ರೀಮತಿ ಗೀತಾ ನಾಗಭೂಷಣ ಅವರು ಈ ಭಾಗದ
ಮೂರನೆಯ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದು
ವಿಶೇಷವಾಗಿದೆ.
|